ಅರಿಸಿನ ತೇಗ : ರೂಬಿಯೇಸೀ ಕುಟುಂಬಕ್ಕೆ ಸೇರಿದ ಅರಣ್ಯವೃಕ್ಷ. ಹೆತ್ತೇಗ,
ಹೆದ್ದಿ ಎಂಬ ಹೆಸರುಗಳನ್ನೂ ಉಳ್ಳ ಈ ಮರದ ವೈಜ್ಞಾನಿಕ ಹೆಸರು ಅಡಿನ
ಕಾರ್ಡಿಫೋಲಿಯ. ಮಧ್ಯಮ ಗಾತ್ರದಿಂದ ಹಿಡಿದು ಅತಿ ದೊಡ್ಡ ಗಾತ್ರದ ಮರವಾಗಿ
ಬೆಳೆಯುತ್ತದೆ. ಫಲವತ್ತಾದ ಪ್ರದೇಶದಲ್ಲಿ ಸುಮಾರು 5 ಮೀ ಸುತ್ತಳತೆಯವರೆಗೂ
ಬೆಳೆದ ನಿದರ್ಶನಗಳಿವೆ. ವರ್ಷಂಪ್ರತಿ ಎಲೆ ಉದುರುವ ಅರಣ್ಯಗಳಲ್ಲಿ (ಡೆಸಿಡ್ಯುವಸ್)
ಹೆಚ್ಚಾಗಿ ಬೆಳೆಯುತ್ತದೆ.
ಇದು ನುಣುಪಾದ ಕಣರಚನೆಯುಳ್ಳ (ಈವನ್‍ಗೇನ್ಡ್) ಸಾಧಾರಣ ಗಟ್ಟಿ ಜಾತಿಯ
ಮರ. ಹೊಸದಾಗಿ ಕಡಿದಾಗ ಈ ಮರದ ಬಣ್ಣ ನಿಂಬೆ ಹಳದಿ. ಕ್ರಮೇಣ ಮಾಸಲು
ಹಳದಿಬಣ್ಣಕ್ಕೆ ತಿರುಗುತ್ತದೆ. ಮರ ಕೊರೆಯಲು ಸುಲಭ, ಹದಮಾಡಲು ತುಂಬ ಯೋಗ್ಯವಾ
ಗಿದೆ. ಮರವನ್ನು ಮನೆಯ ಮರಮುಟ್ಟು ಸಾಮಾನು, ಬಾಚಣಿಗೆ, ಕೆತ್ತನೆ ಸಾಮಾನು,
ಕಂಡರಣೆ ಸಾಮಾನು, ಆಟದ ಸಾಮಾನು, ಬ್ಯಾಟರಿ ಸೆಪರೇಟರ್ ಮತ್ತು ಸಣ್ಣ
ಪೆಟ್ಟಿಗೆಗಳು ಇತ್ಯಾದಿಗಳನ್ನು ಮಾಡಲು ಸಾಧಾರಣವಾಗಿ ಉಪಯೋಗಿಸುತ್ತಾರೆ. ಇತ್ತೀಚೆಗೆ,
ನೂಲಿನ ಮತ್ತು ಬಟ್ಟೆ ಗಿರಣಿಗಳಲ್ಲಿ ಉಪಯೋಗಿಸುವ ಉರುಟಣೆಗಳನ್ನು (ಬಾಬಿನ್ಸ್)
ತಯಾರಿಸಲು ವಿಶೇಷವಾಗಿ ಉಪಯೋಗಿಸುತ್ತಾರೆ. ಪಶ್ಚಿಮ ಕರಾವಳಿಯಲ್ಲಿ ಸಣ್ಣ ಸಣ್ಣ
ದೋಣಿಗಳನ್ನು ತಯಾರಿಸಲು ಇವನ್ನು ಬಳಸುತ್ತಾರೆ.
(ಟಿ.ಜಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ